ಶನಿವಾರ, ಸೆಪ್ಟೆಂಬರ್ 3, 2011

ದಶಕಗಳಿಂದ ಭಣಭಣ ರಾಮನಗುಡ್ಡ ಕೆರೆ

 *ಕೋಟಂಬಳ್ಳಿ ಗುರುಸ್ವಾಮಿ ಕೊಳ್ಳೇಗಾಲ
ಲಕ್ಷಾಂತರ ರೂ. ವೆಚ್ಚದಲ್ಲಿ  ನಿರ್ಮಾಣಗೊಂಡ ತಾಲೂಕಿನ ರಾಮನಗುಡ್ಡ ಕೆರೆ ಎರಡು ದಶಕಗಳಿಂದ ಭಣಗುಡುತ್ತಿದೆ. ವ್ಯವಸಾಯದ ಆಸೆ ಹೊತ್ತು ಕೆರೆ ನೀರನ್ನು ನಿರೀಕ್ಷಿಸಿದ್ದ ರೈತರು ನಿರಾಸೆಗೆ ಒಳಗಾಗಿದ್ದಾರೆ.
ನೀರಾವರಿ ಇಲಾಖೆ ನಿರ್ಲಕ್ಷ್ಯ, ಚುನಾಯಿತ ಪ್ರತಿನಿಧಿಗಳ ಇಚ್ಛಾಶಕ್ತಿ ಕೊರತೆ ಪರಿಣಾಮ ಬಹು ನಿರೀಕ್ಷಿತ ಯೋಜನೆ ಹಳ್ಳ ಹಿಡಿದಿದೆ.
೯೦೦ ಎಕರೆ ಅಚ್ಚುಕಟ್ಟು: ರಾಮನಗುಡ್ಡ ಕೆರೆಯನ್ನು ತಾಲೂಕಿನ ೯೦೦ ಎಕರೆ ಅಚ್ಚುಕಟ್ಟು ಪ್ರದೇಶಕ್ಕೆ ನೀರುಣಿಸುವ ಗುರಿಯೊಂದಿಗೆ ೧೯೮೪ರಲ್ಲಿ ನಿರ್ಮಿಸ ಲಾಯಿತು. ೧೯೭೯ರಲ್ಲಿ ಆರಂಭಗೊಂಡ ಇದರ ನಿರ್ಮಾಣ ಕಾಮಗಾರಿ ಸತತ ಐದು ವರ್ಷ ನಡೆದಿತ್ತು. ೨೫ ವರ್ಷಗಳ ಹಿಂದೆಯೇ ಈ ಕೆರೆಯ ನಿರ್ಮಾಣಕ್ಕೆ ೩೮ ಲಕ್ಷ ರೂ. ವೆಚ್ಚವಾಗಿತ್ತು. ಎಲ್ಲ ಅಂದುಕೊಂಡಂತೆ ನಡೆದಿದ್ದರೆ ಇಂದು ಈ ಕೆರೆ ವರ್ಷಕ್ಕೆ ಎರಡು ಬೆಳೆ ಬೆಳೆಯಲು ನೀರಾವರಿ ಸೌಲಭ್ಯ ಕಲ್ಪಿಸುವ ಮೂಲಕ ಸಾವಿರಾರು ರೈತರ ನೆಮ್ಮದಿಗೆ ಕಾರಣವಾಗಬೇಕಿತ್ತು. ಆದರೆ ಕೆರೆಯ ಈಗಿನ ಸ್ಥಿತಿ ನೋಡಿದರೆ ರೈತರಲ್ಲಿ ಅಸಮಾಧಾನ, ಬೇಸರ ಮನೆ ಮಾಡುತ್ತದೆ. ಲಕ್ಷಾಂತರ ರೂ. ವ್ಯರ್ಥ ಆಯಿತಲ್ಲ ಎಂಬ ಕೊರಗು ಕಾಡುತ್ತಿದೆ. ಇದೆಲ್ಲವೂ ಗೊತ್ತಿದ್ದರೂ ಸಂಬಂಧಪಟ್ಟ ಅಧಿಕಾರಿಗಳದ್ದು ಜಾಣ ಕುರುಡು.